ಪ್ರಾಣಲಿಂಗ - 
ವೀರಶೈವರಲ್ಲಿ ಇಷ್ಟಲಿಂಗ (ನೋಡಿ- ಇಷ್ಟಲಿಂಗ), ಪ್ರಾಣಲಿಂಗ, ಭಾವಲಿಂಗವೆಂಬ ಮೂರು ಪ್ರಕಾರವಾದ ಲಿಂಗಪೂಜೆಗಳಿರುತ್ತವೆ. ಸ್ಥೂಲದಲ್ಲಿ (ತತ್ತ್ವಾಂಗ) ಇಷ್ಟಲಿಂಗ ಪೂಜೆ ಸೂಕ್ಷ್ಮದಲ್ಲಿ (ಭೋಗಾಂಗ) ಪ್ರಾಣಲಿಂಗ ಪೂಜೆ ಕಾರಣದಲ್ಲಿ (ಯೋಗಾಂಗ) ಭಾವಲಿಂಗ ಪೂಜೆಯನ್ನು ಮಾಡಬೇಕೆಂಬ ವಿಧಿಯಿದೆ. ಅನುಭಾವ ವೃತ್ತಿಯಿಂದ ಸೂಕ್ಷ್ಮ ಶರೀರದ ಮೇಲೆ ಪ್ರಭುತ್ವ ಸಂಪಾದಿಸಿರುವ ಯೋಗ ಪ್ರವೀಣರಿಗೆ ಮಾತ್ರ ಪ್ರಾಣಲಿಂಗ ಪೂಜೆ ಸಾಧ್ಯವಾಗುತ್ತವೆ. ಹೃದಯ ಕಮಲ ಮಧ್ಯಸ್ಥವಾದ ಆತ್ಮನನ್ನು ಪ್ರಾಣಾಯಾಮದಿಂದ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಪ್ರಾಣಲಿಂಗ ಪೂಜೆಯೆನಿಸುವುದು. ಜ್ಞಾನದಿಂದ ಅರಿಯತಕ್ಕ ವಸ್ತುವೇ ಚೈತನ್ಯಲಿಂಗ, ಆ ಲಿಂಗದ ಶಕ್ತಿಯೇ ಪ್ರಾಣ, ಅದರ ಕುರುಹೇ ಪ್ರಾಣಲಿಂಗ, ಅದರ ಅನುಸಂಧಾನ ಮಾಡುವವನೇ ಪ್ರಾಣಲಿಂಗಿ. ಪ್ರಾಣ ಮತ್ತು ಪ್ರಾಣೇಶ್ವರನಾದ ಶಿವ ಇವರ ಸಾಮರಸ್ಯವೇ ಪ್ರಾಣಲಿಂಗಪೂಜೆ.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ